ಅಮೆಜಾನ್ ನದಿ : ಪ್ರಪಂಚದ ೨ನೆಯ ಅತಿ ದೊಡ್ಡ ನದಿಗಳಲ್ಲೊಂದು. ಹೆಚ್ಚು
ಪ್ರಮಾಣದಲ್ಲಿ ಹರಿವ ನೀರನ್ನು ತಂದು ಸಮುದ್ರಕ್ಕೆ ಸೇರುವ ಬೇರೊಂದು ನದಿ ಪ್ರಪಂಚದಲ್ಲಿಲ್ಲ.
ದಕ್ಷಿಣ ಅಮೆರಿಕದಲ್ಲಿ ಪೆರುವಿನ ಆಂಡೀಸ್ ಪರ್ವತದಲ್ಲಿ ಹುಟ್ಟಿ ಬ್ರೆಜಿಲ್ ಪ್ರಾಂತ್ಯದಲ್ಲಿ
ಹರಿದು ಅಟ್ಲಾಂಟಿಕ್ ಸಮುದ್ರವನ್ನು ಸೇರುತ್ತದೆ. ಉತ್ತರ ಬ್ರೆಜಿಲಿನ ಎಲ್ಲ ಭಾಗ, ಬೊಲಿವಿಯ,
ಪೆರು, ಈಕ್ವಡಾರ್, ಕೊಲಂಬಿಯ ಮತ್ತು ವೆನಿಜ್ವೇಲಗಳ ಬಹುಮಟ್ಟಿನ ಪ್ರದೇಶಗಳಿಂದ
ನೀರನ್ನು ಎಳೆಯುತ್ತದೆ. ಅಂದರೆ ದಕ್ಷಿಣ ಅಮೆರಿಕದ ೨/೩ ಭಾಗ ನೀರನ್ನು ಬಸಿಯುತ್ತದೆ.

ನದಿಯ ಉದ್ದ ಸು. ೬,೪೩೭ ಕಿಮೀ. ಜಲಾನಯನ ಭೂಮಿಯ ವಿಸ್ತಾರ ಸು.
೬೫,೩೧,೯೮೦ ಚ.ಕಿಮೀ. ಉದ್ದಕ್ಕೂ ನೂರಾರು ಉಪನದಿಗಳು ಬಂದು ಸೇರುತ್ತವೆ.
ಮಳೆಗಾಲದಲ್ಲಿ ಇದರ ಆಳ ಸುಮಾರು ಭಾಗಗಳಲ್ಲಿ ಅದು ೯೦ ಮೀಗೂ ಮೀರುತ್ತ್ತದೆ.
ಮಳೆಗಾಲದಲ್ಲಿ ಪ್ರವಾಹವಿದ್ದಾಗ ನೀರಿನ ವೇಗ ಗಂಟೆಗೆ ೮ ಕಿಮೀ ಉಳಿದ ಕಾಲದಲ್ಲಿ ೫
ಕಿಮೀ ಈ ಬೃಹನ್ನ ದಿಯಲ್ಲಿ ಹರಿಯುವ ನೀರಿನ ಪರಿಮಾಣದಿಂದ ಇದಕ್ಕೆ ಒಳನಾಡು
ಕಡಲು (ಇನ್‍ಲೆಂಡ್ ಸೀ) ಎಂಬ ಹೆಸರು ಬಂದಿದೆ. ಈ ನದಿಯ ಪಾತ್ರದ ಅಗಲ
ಸುಮಾರು ೨.೫ ರಿಂದ ೧೦ ಕಿಮೀ. ಮುಖಭಾಗವು ೧೫೦ ಕಿಮೀಗಿಂತಲೂ ಹೆಚ್ಚು
ಅಗಲವಾಗಿದೆ. ಹೀಗಾಗಿ ನೌಕಾಯಾನಕ್ಕೆ ಅನುಕೂಲವಾಗಿದ್ದು, ಹಡಗುಗಳು ನದಿಯಲ್ಲಿ
೩೬೦೦ ಕಿಮೀವರೆಗೂ ಸಂಚರಿಸುತ್ತವೆ.  ತನ್ಮೂಲಕ ಸರಕುಗಳ ರಫ್ತು ಮತ್ತು ಆಮದುಗಳಿಗೆ
ನೆರವಾಗುವುದರೂಂದಿಗೆ ವ್ಯಾಪಾರೋದ್ಯಮಕ್ಕೆ ಸಹಕಾರಿಯಾಗಿದೆ.

ಇದರ ನೀರು ಇಡೀ ಪ್ರದೇಶವನ್ನಾಕಮಿಸಿರುವುದರಿಂದ ಇದರ ಸುತ್ತ ದಟ್ಟವಾದ
ಉಷ್ಣವಲಯದ ಕಾಡು ಬೆಳೆದಿದೆ. ಯಥೇಚ್ಛವಾಗಿ ನೀರು, ಮೇಲೆ ಬಿಸಿಲು-ಇವುಗಳನ್ನು
ಪಡೆದು ಬೆಳೆದು ನಿಂತಿರುವ ದೈತ್ಯಾಕಾರದ ಮರಗಳೂ ಅವುಗಳ ಮೇಲೆ ಬೆಳೆದು ಬಿಸಿಲಿಗಾಗಿ
ಅವುಗಳ ತುದಿಗೂ ಹೋಗಿ ಎಲೆಗಳನ್ನು ಹರಡಿಕೊಂಡಿರುವ ಅಷ್ಟೇ ಬೃಹದಾಕಾರದ
ಬಳ್ಳಿಗಳೂ ಅಲ್ಲಿವೆ. ದಟ್ಟವಾಗಿ ಹರಡಿರುವ ಈ ಎಲೆಗುಂಪಿನಿಂದಾಗಿ ಎಷ್ಟೋ ಕಡೆ
ಸೂರ್ಯರಶ್ಮಿ ಭೂಮಿಯನ್ನು ತಲುಪಲಾರದು. ಕೆಲವು ಕಡೆಗಳಲ್ಲಂತೂ ಕಪಿ ಮುಂತಾದ
ವೃಕ್ಷವಾಸಿ ಗಳು ಮರಗಳ ಮೇಲೆಯೇ ಹುಟ್ಟಿ ಅಲ್ಲೇ ಬೆಳೆದು ನೆಲವನ್ನು ಕಾಣದೆಯೇ
ಸಾಯುತ್ತವೆ. ಈ ನದಿ ಸಾಗರಕ್ಕೆ ಹೊತ್ತು ತರುವ ನೆರೆಮಣ್ಣು ದಿನಕ್ಕೆ ಮೂವತ್ತು ಲಕ್ಷ
ಟನ್ನುಗಳಷ್ಟು ಎಂದು ಲೆಕ್ಕ ಹಾಕಿದ್ದಾರೆ. ಮಳೆ ಕಡಿಮೆ ಬೀಳುವ ಕೆಲವು ಕಡೆಗಳಲ್ಲಿ
ಹುಲ್ಲುಗಾವಲುಗಳು ಹರಡಿವೆ. ಪ್ರಪಂಚದ ಎಲ್ಲ ಬಗೆಯ ಸಸ್ಯವರ್ಗಗಳೂ ಇಲ್ಲಿವೆ
ಎನ್ನಬಹುದು. ಕಣಿವೆಗಳ ಕೆಳಭಾಗದಲ್ಲಿ ಬಾಳೆಹಣ್ಣು, ಕಾಫಿ, ಕಿತ್ತಳೆ ಮತ್ತು ಎತ್ತರ ಪ್ರದೇಶದಲ್ಲಿ
ಆಲೂಗಡ್ಡೆ, ಬಾರ್ಲಿ, ರಬ್ಬರ್, ಮರಗೆಣಸು, ಕ್ವಿನೈನ್ ಮರಗಳಿವೆ. ಇಲ್ಲಿ ಅನೇಕ ಬಗೆಯ
ಮರ ಹತ್ತುವ ಮತ್ತು ಮರಗಳ ಮೇಲೆಯೇ ವಾಸಿಸುವ ಗಳೂ ಚಿರತೆ ಮುಂತಾದ
ಗಳೂ ಗಿಳಿ, ಹದ್ದು, ನೀರುಕೋಳಿ ಮೊದಲಾದ ಅನೇಕ ಬಗೆಯ ಪಕ್ಷಿಗಳೂ
ಅಸಂಖ್ಯಾತವಾಗಿವೆ. ಕಪ್ಪೆ ಹಾವುಗಳು ಹೆಚ್ಚು. ನದಿಯ ದಂಡೆಯ ಮೇಲೆ ಕೆಲವು ಪ್ರಸಿದ್ಧ
ಪಟ್ಟಣಗಳಿವೆ. ರಬ್ಬರ್ ಉತ್ಪಾದನೆ ಈಚೆಗೆ ಕಡಿಮೆಯಾಗಿದೆ. ಅಣೆಕಟ್ಟುಗಳನ್ನು ಕಟ್ಟಿ
ಪ್ರವಾಹವನ್ನುತಡೆದು ಜನರಿಗೆ ಇರಲು ಅನುಕೂಲ ಮಾಡಿಕೊಟ್ಟರೆ ಈ ಪ್ರದೇಶ ಇಡೀ
ಪ್ರಪಂಚದ ಆಹಾರ ಕಣಜವಾಗಬಲ್ಲದು.
(ಬಿ.ಒ.)
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ